ದಂತದ ಗೋಪುರ-
ಲೌಕಿಕ ಅಥವಾ ವ್ಯವಹಾರಿಕ ವಿಷಯಗಳಿಗೆ ದೂರವಾಗಿರುವ ಸ್ಥಳ ಅಥವಾ ಸನ್ನಿವೇಶ (ಐವರಿ ಟವರ್). ಫ್ರೆಂಚ್ ವಿಮರ್ಶಕ ಸೆಂತ್ ಬವ್ ಐವರಿ ಟವರ್ ಎಂಬ ಶಬ್ದಗುಚ್ಛವನ್ನು ಬೈಬಲಿನಿಂದ ತೆಗೆದುಕೊಂಡು, ಕವಿ ಆಲ್ಫೆಡ್‍ದ ವೀನಿಯನ್ನು ವರ್ಣಿಸುವುದಕ್ಕೆ ಉಪಯೋಗಿಸಿದ. ಹೊರ ಜಗತ್ತಿನ ಸಂಪರ್ಕ ಸ್ವಲ್ಪವೂ ತಾಕದಂತಿರುವ ಒಂದು ಕಡೆ ತನ್ನಷ್ಟಕ್ಕೇ ತಾನೇ ವಾಸಿಸುತ್ತ, ಆ ಜಗತ್ತನ್ನು ಅನಾಸಕ್ತ ದೃಷ್ಟಿಯಿಂದ ಈಕ್ಷಿಸುತ್ತ, ತನ್ನ ಕವನಗಳನ್ನು ದ ವೀನಿ ಕಟ್ಟುತ್ತಿದ್ದನೆಂದು ಸೆಂತ್ ಬವ್‍ನ ಇಂಗಿತ. ಅಂದಿನಿಂದ ದಂತದ ಗೋಪುರವೆಂಬುದು ರೂಪಕಾಲಂಕಾರವಾಗಿ ಸಾಹಿತ್ಯ ವಿಮರ್ಶೆಯಲ್ಲಿ ನಿಂತುಕೊಂಡಿದೆ. ಕವಿ ದಿಟವಾಗಿ ಅಂಥ ದುರ್ಗದಲ್ಲಿ ನಿಸ್ಸಂಗನಾಗಿ ಬಾಳಬೇಕಾದ್ದಿಲ್ಲ. ಲೋಕವನ್ನು ಕುರಿತು ಅವನಿಗಿರುವ ಮನೋಭಾವಕ್ಕೆ ವೈರವಾಗಲಿ, ಸ್ನೇಹವಾಗಲಿ ಇಲ್ಲದಿದ್ದರೆ ಆಯಿತು. ನಿಷ್ಪಕ್ಷಪಾತ ಮನೋಭಾವ ಇರಬೇಕು ಎಂಬುದು ಇದರ ತಾತ್ಪರ್ಯ. ಕೆಲವು ಸಾರಿ ಕಾವ್ಯದ ವಿಷಯಕ್ಕೆ ಸೇರಿದ ಅತಿ ಸೂಕ್ಷ್ಮ ವಿವರಗಳನ್ನು ನವಿರುನವಿರಾಗಿ ನಿರ್ದೇಶಿಸುವ ಜಾಯಮಾನದವರಿಗೂ ಶಬ್ದಗಳನ್ನು ಬಳಸುವಾಗ ವಿಪರೀತ ನಚ್ಚು ಎಚ್ಚರಿಕೆಗಳನ್ನು ತೋರುವ ಚಿತ್ತ ವೃತ್ತಿಯವರಿಗೂ ದಂತದ ಗೋಪುರವಾಸಿಗಳೆನ್ನುವುದುಂಟು.

ಮಾತು, ಶೈಲಿ ಕಾಲದಿಂದ ಕಾಲಕ್ಕೆ ಬದಲಾದರೂ ಕಾವ್ಯದ ತಾತ್ಪರ್ಯ ಎಂದಿಗೂ ಒಂದೇ ಆಗಿದೆ. ಪ್ರಾಮಾಣಿಕ ಕವಿ ಬಹಳ ಹೊತ್ತು ಏಕಾಂಗಿಯಾಗಿ ಕೆಲಸ ಮಾಡದೇ ಗತ್ಯಂತರವಿಲ್ಲ. ಅದಕ್ಕೆ ತಕ್ಕ ಅನುಕೂಲವಿಲ್ಲದಿದ್ದರೆ ಅವನ ಲೇಖನ ಸುಂದರವಾಗಿ ಓಡಲಾರದು. ದಂತದ ಗೋಪುರವಾಸ ಕವಿಗೆ ಅತ್ಯಗತ್ಯ. ಕವಿ ಪರವಾದ ಈ ಸಮರ್ಥನೆಗೆ ವಿಮರ್ಶಕರ ಒಂದು ಭಾಗ ಹೌದೆನ್ನುತ್ತದೆ.

ಇನ್ನೊಂದು ಭಾಗವಾದರೋ ಅಂಥ ಕವಿಯನ್ನು ಗರ್ವಿಷ್ಠ, ಭೂತದಯೆ ಇಲ್ಲದವ, ಕೇವಲ ಸ್ವಾರ್ಥಿ ಎಂದು ಹೀಗಳೆಯುತ್ತದೆ. ವ್ಯಾವಹಾರಿಕ ಜಗತ್ತಿನ ಆಗುಹೋಗುಗಳಿಂದ ಕವಿ ಹೊರಗೆ ನಿಲ್ಲಬಾರದು; ಅವುಗಳಲ್ಲಿ ಲೀನವಾಗಿ ಕಾವ್ಯ ರಚನೆ ಮಾಡಬೇಕು. ಆಗ ಮಾತ್ರ ಕಾವ್ಯಕ್ಕೆ ಸಹಜತೆ, ನೈಜತೆ ಬರುತ್ತದೆ ಎಂಬುದು ಈ ಪಂಗಡದ ವಾದ. 		
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ